ಸಾಹಿತ್ಯ
ಜೈಮಿನಿ ಭಾರತ
  1. ಕಾವ್ಯದ ಹೆಸರು: ಜೈಮಿನಿ ಭಾರತ
  2. ಕವಿಯ ಹೆಸರು: ಲಕ್ಷ್ಮೀಶ
  3. ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
  4. ಸ್ಥಳ/ಸ್ಥಳಗಳು: ಚಿಕ್ಕಮಗಳೂರು ಜಿಲ್ಲೆಯ ದೇವನೂರು. (ಗುಲ್ಬರ್ಗ ಜಿಲ್ಲೆಯ ಸುರಪುರ.
  5. ಮತ-ಧರ್ಮ: ಬ್ರಾಹ್ಮಣ
  6. ಆಶ್ರಯದಾತರು: ಯಾವ ರಾಜನೂ ಇಲ್ಲ
  7. ಬಿರುದುಗಳು: ಕರ್ನಾಟ ಕವಿಚೂತವನ ಚೈತ್ರ, ಉಪಮಾಲೋಲ.
  8. ಸಾಹಿತ್ಯಪ್ರಕಾರ: ಕಾವ್ಯ
  9. ಛಂದೋರೂಪ: ವಾರ್ಧಕ ಷಟ್ಪದಿ.
  10. ಹಸ್ತಪ್ರತಿಗಳು: ಓಲೆಯ ಗರಿ ಮತ್ತು ಕಾಗದ
  11. ಪ್ರಕಟವಾದ ವರ್ಷ: 1848, (ಕಲ್ಲಚ್ಚಿನ ಪ್ರತಿ), 1875, ವ್ಯಾಖ್ಯಾನಸಹಿತವಾಗಿ (ಕಲ್ಲಚ್ಚಿನ ಪ್ರತಿ)
  12. ಸಂಪಾದಕರು: ವೆಂಕಟ ರಂಗೋ ಕಟ್ಟಿ (1875)(ಕಲ್ಲಚ್ಚಿನ ಪ್ರತಿ), ಹೊಳಕಲ್ ಶ್ರೀನಿವಾಸ ಪಂಡಿತ, 1875, ಮುದ್ರಿತ ಪ್ರತಿ.
  13. ಪ್ರಕಾಶಕರು: ಕೃಷ್ಣರಾಜ ಮುದ್ರಾಕ್ಷರಶಾಲೆ, ಮೈಸೂರು.

  14. ನಂತರದ ಆವೃತ್ತಿಗಳು:

ಅ. ಟೀಕಾ ಜೈಮಿನಿ ಭಾರತವು( ವ್ಯಾಖ್ಯಾನ ಮತ್ತು ಸಾರಾಂಶ ಸಹಿತ), ಬಿ.ಎಂ.ಸಿದ್ದಲಿಂಗ ಶಾಸ್ತ್ರೀ, 1897, ವಾಣೀವಿಲಾಸ ಬುಕ್ ಡಿಪೋ, ಬೆಂಗಳೂರು.

ಆ. ಜೈಮಿನಿ ಭಾರತ(ಮೂರು ಸಂಪುಟಗಳಲ್ಲಿ) ( ವ್ಯಾಖ್ಯಾನ ಮತ್ತು ಸಾರಾಂಶ ಸಹಿತ), 1888, ರಾಜರಾಜೇಶ್ವರಿ ಮುದ್ರಾಕ್ಷರ ಶಾಲೆ, ಬೆಂಗಳೂರು

ಇ. ಕರ್ಣಾಟಕ ಜೈಮಿನಿ ಭಾರತವು, ಪಿ.ಆರ್. ಕರಿಬಸವ ಶಾಸ್ತ್ರೀ, 1912.

ಈ. ಪ್ರತಿಪದಾರ್ಥ ಮತ್ತು ತಾತ್ಪರ್ಯಗಳೊಂದಿಗೆ, ಸಂ. ದೊಡ್ಡಬೆಲೆ ನಾರಾಯಣಶಾಸ್ತ್ರೀ, 1912, ಟಿ.ಎನ್. ಕೃಷ್ಣಯ್ಯಶೆಟ್ಟಿ, ಬೆಂಗಳೂರು

ಉ. ಸಂ. ಬಿ. ಭೀಮಸೇನರಾವ್, 1939, ಟಿ.ಎನ್. ಕೃಷ್ಣಯ್ಯಶೆಟ್ಟಿ, ಬೆಂಗಳೂರು

ಊ. ಜೈಮಿನೀಭಾರತ ಸಂಗ್ರಹ, ಸಂ. ದೇ.ಜವರೇಗೌಡ, 1959, ವಯಸ್ಕರ ಶಿಕ್ಷಣ ಸಮಿತಿ, ಮೈಸೂರು.

ಋ. ಸಂ. ಬಿ.ಎಸ್. ಸಣ್ಣಯ್ಯ ಮತ್ತು ರಾಮೇಗೌಡ, 1993, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

(ಇನ್ನೂ ಹಲವು ಜನಪ್ರಿಯ ಆವೃತ್ತಿಗಳು, ಸಂಗ್ರಹಗಳು ಮತ್ತು ಭಾಗಶಃ ಪ್ರಕಟಣೆಗಳು ಹೊರಬಂದಿವೆ.)

  1. ಕಿರು ಪರಿಚಯ: ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಜೈಮಿನಿ ಭಾರತವು ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದಾಗಿತ್ತು. ಗಮಕ ಪರಂಪರೆಯ ನೆರವಿನಿಂದ ಹಳ್ಳಹಳ್ಳಿಗಳಲ್ಲಿಯೂ ಪ್ರಚುರವಾಗಿದ್ದ ಈ ಕಾವ್ಯದ ಅನೇಕ ಸನ್ನಿವೇಶಗಳು ನಾಟಕರೂಪವನ್ನೂ ಪಡೆಯುತ್ತಿದ್ದವು. ಜೈಮಿನಿ ಭಾರತವು, ಸಂಸ್ಕೃತದಲ್ಲಿ ಜೈಮಿನಿ ಎಂಬ ಋಷಿಯಿಂದ ರಚಿತವಾದ ಕಾವ್ಯ. ಲಕ್ಷ್ಮೀಶನ ಕಾವ್ಯವು ಯಾವುದೇ ಅರ್ಥದಲ್ಲಯೂ ಮೂಲದ ಕನ್ನಡ ಅನುವಾದವಲ್ಲ. ಕವಿಯು ತನಗಿರುವ ಸ್ವಾತಂತ್ರ್ಯವನ್ನು ಉಪಯೋಗಿಸಿ ಅನೇಕ ನೀರಸವಾದ ಭಾಗಗಳನ್ನು ಬಿಟ್ಟಿದ್ದಾನೆ ಮತ್ತು ತನ್ನದೇ ಆದ ಹೊಸ ಾಯಾಮಗಳನ್ನು ಸೇರಿಸಿದ್ದಾನೆ. ಈ ಕಾವ್ಯದಲ್ಲಿ 34 ಅಧ್ಯಾಯಗಳಿದ್ದು ವಾರ್ಧಕ ಷಟ್ಪದಿಯಲ್ಲಿರುವ 1936 ಪದ್ಯಗಳಿವೆ. ಈ ಕಾವ್ಯವು, ಮಹಾಭಾರತ ಯುದ್ಧವು ಮುಗಿದು, ಧರ್ಮರಾಯನ ಪಟ್ಟಾಭಿಷೇಕವಾದ ನಂತರದ ಘಟನೆಗಳ ಮೇಲೆ ಒತ್ತು ಕೊಟ್ಟಿದೆ. ಇದು ವ್ಯಾಸಭಾರತದ ಅಶ್ವಮೇಧಿಕಪರ್ವದಲ್ಲಿ ಬರುವ ಕಥಾಭಾಗ. ಕೃಷ್ಣನ ದೈವಿಕತೆಯನ್ನು ಖಚಿತವಾಗಿ ಸ್ಥಾಪಿಸುವ ಮತ್ತು ಅರ್ಜುನನಂತಹ ಉದ್ಧಟ ವೀರರಿಗೆ ವಿನಯದ ಪಾಠ ಕಲಿಸುವ ತನ್ನ ಉದ್ದೇಶದಲ್ಲಿ ಕವಿಯು ಯಶಸ್ಸು ಪಡೆದಿದ್ದಾನೆ. ಅಶ್ವಮೇಧಯಾಗವನ್ನು ಮಾಡಬೇಕೆಂಬ ಧರ್ಮರಾಯನ ತೀರ್ಮಾನ ಮತ್ತು ಅದರ ಪೂರ್ವಸಿದ್ಧತೆ, ಪರಿಣಾಮಗಳನ್ನು ಬಹಳ ವಿವರವಾಗಿ ನಿರೂಪಿಸಲಾಗಿದೆ. ಅರ್ಜುನನು ತನಗಿಂತಲೂ ಎಷ್ಟೋ ಪಟ್ಟು ಬಲಶಾಲಿಗಳಾದ, ಆದರೆ ಕೃಷ್ಣನ ಬಗ್ಗೆ ಪ್ರಶ್ನಾತೀತವಾದ ಗೌರವವನ್ನು ಹೊಂದಿರುವ ಅನೇಕ ವೀರರನ್ನು ಅರ್ಜುನನು ಭೇಟಿಯಾಗುತ್ತಾನೆ. ಸುಧನ್ವ, ಹಂಸಧ್ವಜ, ಯೌವನಾಶ್ವ ಮುಂತಾದ ಅನೇಕ ವೀರರು ಅರ್ಜುನನನ್ನು ಸೋಲಿನ ಅಂಚಿಗೆ ತರುತ್ತಾರೆ. ಆದರೆ, ಎಲ್ಲ ಸಂದರ್ಭಗಳಲ್ಲಿಯೂ ಅವನು ಕೃಷ್ಣನ ಅನುಗ್ರಹದಿಂದ ಗೆಲುವು ಪಡೆಯುತ್ತಾನೆ ಮತ್ತು ಮರೆಯಲಾಗದ ಪಾಠವನ್ನು ಕಲಿಯುತ್ತಾನೆ. ಆದ್ದರಿಂದ ಜೈಮಿನಿ ಭಾರತವು ಪರಾಕ್ರಮವನ್ನು ಹಿನ್ನೆಲೆಗೆ ಸರಿಸಿ, ಭಕ್ತಿಯನ್ನು ಮುಂದೆಮಾಡುವ ಭಕ್ತಿಯುಗದ ಉತ್ಪನ್ನವೆಂದರೂ ತಪ್ಪಿಲ್ಲ.

ಆದರೆ, ಲಕ್ಷ್ಮೀಶನ ಕೃತಿಯ ಜನಪ್ರಿಯತೆಗೆ,ತನ್ನ ಕಾವ್ಯವಸ್ತುವಿನ ನಿರ್ವಹಣೆಯಲ್ಲಿ ಕವಿಯು ತೋರಿಸಿರುವ ಅನುಪಮವಾದ ಕುಶಲತೆಯೇ ಕಾರಣ. ವಾಸ್ತವವಾಗಿ ಜೈಮಿನಿ ಭಾರತವು ಸ್ವತಂತ್ರವಾದ ಕಥೆಗಳ ಗೊಂಚಲು. ಯಾಗದ ಕುದುರೆಯ ಹಿಂದೆ ಚಲಿಸುತ್ತಾ ಲೋಕಪರ್ಯಟನೆ ಮಾಡುವ ಅರ್ಜುನನು ಈ ಕಥೆಗಳನ್ನು ಪೋಣಿಸುವ ದಾರ. ಆದರೆ, ಈ ಕಾವ್ಯದ್ದು, ಬಿಡುಬೀಸಾಗಿ ಚಲಿಸುವ ನಿಧಾನಗತಿಯೇ ವಿನಾ ಯುದ್ಧಕಾತರವಾದ ನಾಗಾಲೋಟವಲ್ಲ. ಲಕ್ಷ್ಮೀಶನಿಗೆ ನಿರೂಪಣೆಯ ಕೌಶಲ್ಯ ಮತ್ತು ಭಾಷೆಯ ಮೇಲಿನ ಪ್ರಭುತ್ವಗಳೆರಡೂ ಇವೆ. ಅವನು ನಿಸರ್ಗಸೌಂದರ್ಯವನ್ನು ಗುರುತಿಸಬಲ್ಲ. ಅಂತೆಯೇ ಮನುಷ್ಯಸ್ವಭಾವದ ಆಳವಾದ ಪರಿಚಯವೂ ಅವನಿಗಿದೆ. ಈ ಕಾವ್ಯದಲ್ಲಿ ಬರುವ ಸೀತಾಪರಿತ್ಯಾಗದ ಹೃದಯಸ್ಪರ್ಶಿಯಾಗಿದ್ದು, ಸರಿಯಾಗಿ ವ್ಯಾಖ್ಯಾನ ಮಾಡಿದಾಗ ಅದು ಸ್ತ್ರೀವಾದೀ ಆಯಾಮಗಳನ್ನು ಪಡೆಯಬಲ್ಲುದು. ಚಂಡಿ-ಉದ್ಧಾಲಕರ ಪ್ರಸಂಗದಲ್ಲಿ ಲಕ್ಷ್ಮೀಶನ ಹಾಸ್ಯಪ್ರಜ್ಞೆಯು ಪ್ರಖರವಾಗಿ ಕಂಡುಬರುತ್ತದೆ. ಚಂದ್ರಹಾಸನ ಕಥೆಯು ಕನ್ನಡ ಓದುಗರಿಗೆ ಪ್ರಿಯವಾದ ಇನ್ನೊಂದು ಸಂದರ್ಭ. ಕವಿಯು ತನ್ನ ಕಾವ್ಯದಲ್ಲಿ ವೀರ, ಶೃಂಗಾರ, ಕರುಣ, ಹಾಸ್ಯ ಮುಂತಾದ ರಸಗಳನ್ನು ಅಂತೆಯೇ ಭಕ್ತಿಯಂತಹ ಭಾವನೆಗಳನ್ನು ನಿರೂಪಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ ಮತ್ತು ಅವುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾನೆ. ಈ ಕವಿಯ ಪ್ರತಿಭೆಯು ಅವನು ಬಳಸುವ ಉಪಮೆಗಳಲ್ಲಿ ಹಾಗೂ ಸಂಗೀತಕ್ಕೆ ಸಮೀಪವೆನ್ನುವಷ್ಟು ಮಧುರವಾದ ಭಾಷೆಯ ಬಳಕೆಯಲ್ಲಿ ನಿರ್ದಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅವನನ್ನು ಉಪಮಾಲೋಲ, ನಾದಲೋಲ ಎಂದೇ ಕರೆಯಲಾಗಿದೆ.

ಕನ್ನಡದ ಶ್ರೇಷ್ಠ ವಿಮರ್ಶಕರಾದ ಕುವೆಂಪು, ಬೇಂದ್ರೆ, ಮಾಸ್ತಿ, ಕುರ್ತಕೋಟಿ, ಚಿ.ಎನ್. ರಾಮಚಂದ್ರನ್ ಅವರು ಲಕ್ಷ್ಮೀಶನ ಬಗ್ಗೆ ವಿವರವಾದ ಮತ್ತು ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಮಾಡಿದ್ದಾರೆ.

  1. ಮುಂದಿನ ಓದು:

ಅ. ಕವಿ ಲಕ್ಷ್ಮೀಶ, 1933, ಕರ್ನಾಟಕಸಂಘ, ಚಿಕ್ಕಮಗಳೂರು

ಆ. ಲಕ್ಷ್ಮೀಶ, ಎನ್ ಅನಂತರಂಗಾಚಾರ್, 1955(ಎರಡನೆಯ ಮುದ್ರಣ), ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಇ. ಕವಿ ಲಕ್ಷ್ಮೀಶನ ಕಾವ್ಯಾಲಂಕಾರ ವೈಭವ, ರಾ.ನ. ಮಳಗಿ, 1960.

ಈ. ಕಾವ್ಯವಿಹಾರ, ಕುವೆಂಪು

ಉ. ಸಾಹಿತ್ಯದ ವಿರಾಟ್ ಸ್ವರೂಪ, ದ.ರಾ.ಬೇಂದ್ರೆ, 1975, ಸಮಾಜ ಪುಸ್ತಕಾಲಯ, ಧಾರವಾಡ.

ಊ. ಲಕ್ಷ್ಮೀಶನ ಜೈಮಿನಿ ಭಾರತ-ಒಂದು ಅಧ್ಯಯನ, ವಾಮನ ಡಿ. ಬೇಂದ್ರೆ, 1979, ಗೀತಾ ಬುಕ್ ಹೌಸ್, ಮೈಸೂರು.

  1. ವಿದ್ಯುನ್ಮಾನ ಲಿಂಕುಗಳು:

ಅ. Jaimini Bharata - vaachana & vyaakyaana by Dr.Nagavalli Nagaraj ...

ಆ. The Jaimini Bharata : celebrated Canarese poem.

 

ಮುಖಪುಟ / ಸಾಹಿತ್ಯ